ಡೆಲ್ಫಿನಿಯಮ್
ರ್ಯಾನನ್‍ಕ್ಯುಲೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ.  ಇದಕ್ಕೆ ಲಾರ್ಕ್‍ಸ್ಟರ್ ಎಂಬ ಬಳಕೆಯ ಹೆಸರುಂಟು.  ಇದು ಯೂರೋಪ್, ಏಷ್ಯ, ಉತ್ತರ ಅಮೆರಿಕ ಹಾಗೂ ಆಫ್ರಿಕದಲ್ಲಿಯ ಪರ್ವತ ಪ್ರದೇಶಗಳ ಮೂಲವಾಸಿ.  ಚಳಿಗಾಲದಲ್ಲಿ ಮತ್ತು ಗಿರಿಧಾಮ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.  ಇದು ಏಕವಾರ್ಷಿಕ ಇಲ್ಲವೇ ಬಹುವಾರ್ಷಿಕ ಮೂಲಿಕೆ.  ಇದರ ಎತ್ತರ 25-125 ಸೆಂ.ಮೀ. ಎಲೆಗಳು ಸಣ್ಣಪುಟ್ಟ ಹಾಲೆಗಳಿಂದ ಕೂಡಿವೆ.  ಹೂಗಳು ರೆಸೀಮ್ ಮಾದರಿಯ ಗೊಂಚಲಿನಲ್ಲಿ ಸಮಾವೇಶಗೊಂಡಿವೆ.   ಪ್ರತಿ ಹೂವಿನಲ್ಲಿ 5 ಪುಷ್ಪ ಪತ್ರಗಳು, 2-4 ದಳಗಳು, ಅಸಂಖ್ಯ ಕೇಸರಗಳು, 1-5 ಕಾರ್ಪೆಲುಗಳುಳ್ಳು ಅಂಡಾಶಯ ಇವೆ.  ಪುಪ್ಪಪತ್ರಗಳಲ್ಲಿ ಬೆನ್ನುಭಾಗದೆಡೆಗೆ ಇರುವಂಥದು ಕೊಳವೆಯಾಕಾರದಲ್ಲಿ ಹಿಮ್ಮುಖವಾಗಿ ಚಾಚಿಕೊಂಡಿದೆ.  ಕಾರ್ಪೆಲುಗಳು ಬಿಡಿಬಿಡಿಯಾಗಿವೆ.

ಡೆಲ್ಫಿನಿಯಮ್ ಗಿಡಗಳನ್ನು ತೋಟಗಳಲ್ಲಿ ಸಾಮಾನ್ಯವಾಗಿ ಬೆಳೆಸುತ್ತಾರೆ.  ಮೈಸೂರು, ಬೆಂಗಳೂರು, ಉದಕಮಂಡಳ ಪ್ರದೇಶದ ತೋಟಗಳಲ್ಲಿ ಇವು ಸರ್ವೇಸಾಧಾರಣ.  ಇವನ್ನು ಬೀಜಗಳ ಮೂಲಕ ಬೆಳೆಸಬಹುದು.  ಮರಳು ಮಿಶ್ರಿತ ಗೋಡು ಹಾಗೂ ಬಿಸಿಲು ಚೆನ್ನಾಗಿ ಬೀಳುವಂಥ ಸ್ಥಳ ಇವನ್ನು ಬೆಳೆಸಲು ಅತ್ಯುತ್ತಮ.  ಕೆಲವೆಡೆಗಳಲ್ಲಿ ಬೇರುತುಂಡು ಇಲ್ಲವೆ ಕಾಂಡತುಂಡುಗಳ ಮೂಲಕವೂ ಬೆಳೆಸುವುದುಂಟು.  ಡೆಲ್ಫಿನಿಯಮ್ ಅತಿಯಾದ ನೀರನ್ನು ತಡೆದುಕೊಳ್ಳುವುದಿಲ್ಲ.

ಇದರ ಮುಖ್ಯ ಪ್ರಭೇದಗಳು ಇವು-ಅಜಾಸಿಸ್, ಕನ್‍ಸಾಲಿಡ, ನ್ಯೂಡಿಕಾಲೆ, ಡೆಕೋರಮ್, ಗ್ರ್ಯಾಂಡಿಪ್ಲೋರಮ್, ಹೈಬ್ರಿಡಮ್, ಫಾರ್ಮೋಸಮ್, ಜಾಲಿಲ್ ಮತ್ತು ಕೈಲಾಂತಮ್.			(ಡಿ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ